ಕುಚಿ

 ಮಧ್ಯ ಏಷ್ಯದಲ್ಲಿ ಡಾರೀಮಾ ನದಿಯ ದಡದಲ್ಲಿರುವ ಒಂದು ಸ್ಥಳ (ಈಗಿನ ಹೆಸರು ಕುಚಾರ್). ಭಾರತೀಯ ಸಂಸ್ಕøತಿಯ ವಿಸ್ತರಣಕಾರ್ಯದಲ್ಲಿ ಪ್ರಮುಖಪಾತ್ರ ವಹಿಸಿತ್ತು. ಪುರಾತನ ಭಾರತ-ಚೀನಗಳ ವಾಣಿಜ್ಯಕ-ಸಾಂಸ್ಕøತಿಕ ಮಾರ್ಗಗಳಲ್ಲೊಂದರ ಮೇಲಿದ್ದ ಈ ಸ್ಥಳ ಬೌದ್ಧ ಧರ್ಮದ ಕೇಂದ್ರಗಳಲ್ಲೊಂದಾಗಿದ್ದು ಚೀನದಲ್ಲಿ ಬೌದ್ಧಧರ್ಮ ಪ್ರಚಾರವಾಗಲು ಬಹಳಮಟ್ಟಿಗೆ ಕಾರಣವಾಯಿತು. ಚೀನೀ ಇತಿಹಾಸಕಾರದಿಂದ ಕುಚಿಯ ಒಂದು ಸಾವಿರ ವರ್ಷಗಳ ಇತಿಹಾಸ ತಿಳಿದು ಬರುತ್ತದೆ. ಇದು ಆಗಾಗ್ಯೆ ಚೀನದೊಂದಿಗೆ ಹೋರಾಡಿ ಅದರ ಅಧೀನವಾಗಬೇಕಾಗಿ ಬಂದರೂ ಪುನಃಪುನಃ ಶೀಘ್ರವಾಗಿ ಸ್ವಾತಂತ್ರ್ಯ ಗಳಿಸಿಕೊಳ್ಳುತ್ತಿತ್ತು.

 ಮೊದಲಿನಿಂದಲೂ ಇಲ್ಲಿಯ ಅರಸರು ಸುವರ್ಣಪುಷ್ಪ, ಹರದೇವ, ಸುವರ್ಣ ದೇವ ಮುಂತಾದ ಭಾರತೀಯ ಹೆಸರುಗಳನ್ನು ಧರಿಸುತ್ತಿದ್ದರು. ಇಂಡೋಯುರೋಪಿಯನ್ ಭಾಷಾಸಂತತಿಗೆ ಸೇರಿದ ಕುಚಿ ಭಾಷೆ ಬೌದ್ಧಮತದ ಮೂಲಕ ಸಂಸ್ಕøತದ ಪ್ರಭಾವಕ್ಕೊಳಗಾಯಿತು. ಇಲ್ಲಿಯ ಬೌದ್ಧ ಭಿಕ್ಷುಗಳಿಗೆ ಸಂಸ್ಕøತ ಭಾಷೆಯ ಪರಿಚಯವಿತ್ತು. ಅವರು ಆ ಭಾಷೆಯಲ್ಲಿ ಮಾತನಾಡುತ್ತಿದ್ದದಾಗಿ ಚೀನೀ ಬರೆಹಗಾರರು ತಿಳಿಸುತ್ತಾರೆ. ಇಲ್ಲಿ ದೊರಕಿರುವ ಸಂಸ್ಕøತ ಮತ್ತು ಕುಚಿ-ಸಂಸ್ಕøತ ದ್ವಿಭಾಷೆಗಳ ಗ್ರಂಥಗಳ ಹಸ್ತಪ್ರತಿಗಳು ಈ ವಿಷಯವನ್ನು ಸಿದ್ಧಪಡಿಸುತ್ತವೆ. ಈ ಜನ ಉಪಯೋಗಿಸುತ್ತಿದ್ದ ಲಿಪಿಯೂ ಭಾರತೀಯ ಲಿಪಿಸಂತತಿಗೆ ಸೇರಿದ್ದೇ. ಅಜಂತ ಮತ್ತು ಬಮಿಯಾನ್ ಬಳಿಯ ಗುಹೆಗಳಲ್ಲಿದ್ದಂತೆ ಕುಚಾರ್ ಪಟ್ಟಣದ ಬಳಿಯ ಪರ್ವತ ಗುಹೆಗಳಲ್ಲೂ ಬೌದ್ಧ ಭಿಕ್ಷುಗಳು ಧ್ಯಾನ ಮತ್ತು ಧರ್ಮಗ್ರಂಥಾಭ್ಯಾಸಗಳಲ್ಲಿ ನಿರತರಾಗಿ ಪ್ರಶಾಂತ ಜೀವನ ನಡೆಸುತ್ತಿದ್ದರು. 3-4-5ನೆಯ ಶತಮಾನಗಳಲ್ಲಿ ಚೀನೀಯರಲ್ಲಿ ಬೌದ್ಧಮತ ಪ್ರಚಾರ ಮಾಡಿದ ಬೌದ್ಧಭಿಕ್ಷುಗಳಲ್ಲಿ ಮೊದಲನೆಯವನಾದ ಕುಮಾರಜೀವನ ತಂದೆ ಕುಮಾರಾಯಣ ಕುಚಾರ್ ನಗರವಾಸಿಯಾಗಿದ್ದ. ಈತ ಭಾರತೀಯ, ಅಲ್ಲಿಯ ರಾಜಗುರು. ಕುಮಾರಜೀವನ ತಾಯಿ ಜೀವಾ ಕುಚಿ ರಾಜಮನೆತನಕ್ಕೆ ಸೇರಿದ್ದವಳು. ಕುಮಾರ ಜೀವನ ಜನನಾಂತರ ಅವಳು ಬೌದ್ಧಭಿಕ್ಷುಣಿಯಾದಳು. ಕುಚಿಯನ್ನು ಯುದ್ಧದಲ್ಲಿ ಸೋಲಿಸಿದ ಚೀನೀ ಸೈನಿಕರು ಕುಮಾರಜೀವನನ್ನು ಸೆರೆ ಹಿಡಿದು, 383 ರಲ್ಲಿ ತಮ್ಮ ದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿ ಈತ ಚಕ್ರವರ್ತಿಯ ಆಸ್ಥಾನ ಪಂಡಿತನಾದ. ಈತ ಚೀನ-ಭಾರತಗಳ ಮಧ್ಯೆ ಏರ್ಪಟ್ಟ ಸಾಂಸ್ಕøತಿಕ ಸಂಪರ್ಕಗಳದ್ಯೋತಕ. ಈ ಕಾಲದಲ್ಲಿ ಕುಚಿ ಮತ್ತು ಕಾಶ್ಮೀರಗಳ ಮಧ್ಯೆ ನಿಕಟಸಂಪರ್ಕವೇರ್ಪಟ್ಟು ಕಾಶ್ಮೀರದ ಅನೇಕ ಬೌದ್ಧಭೀಕ್ಷುಗಳೂ ಪಂಡಿತರೂ ಕುಚಿಯಿಂದ ಆಕರ್ಷಿತರಾಗಿ ಅಲ್ಲಿ ನೆಲೆಸಿದುದರಿಂದ ಅಲ್ಲಿ ಭಾರತೀಯ ಸಂಸ್ಕøತಿ ಬಹುಮುಖವಾಗಿ ಬೆಳೆಯಿತು. ಭಾರತದಿಂದ ಚೀನಕ್ಕೆ ಹೋಗುತ್ತಿದ್ದ ಅನೇಕ ಬೌದ್ಧಭಿಕ್ಷುಗಳು ಮಾರ್ಗಮಧ್ಯದಲ್ಲಿ ಕುಚಿಯಲ್ಲಿ ಕೆಲಕಾಲ ತಂಗುತ್ತಿದ್ದುದರಿಂದ ಅವರ ಮೇಲೆ ಭಾರತೀಯ ಸಂಸ್ಕøತಿಯ ಪ್ರಭಾವ ಇನ್ನೂ ಅಧಿಕವಾಯಿತು.

(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ